ಕಾನ್‍ಸ್ಟಾನ್‍ಷಸ್

 ಈ ಹೆಸರಿನ ಮೂವರು ರೋಮನ್ ಚಕ್ರವರ್ತಿಗಳಿದ್ದಾರೆ. ಅವರ ಜೀವನಚರಿತ್ರೆಯ ವಿವರಗಳನ್ನು ಇಲ್ಲಿ ಕೊಡಲಾಗಿದೆ.

 1ನೆಯ ಕಾನ್‍ಸ್ಟಾನ್‍ಷಸ್ (ಕ್ಲೋರಸ್) : ಮರಣ 306. ರೋಮಿನ ಚಕ್ರವರ್ತಿ. ಡಾರ್ಡಾನ್ ಪ್ರದೇಶಕ್ಕೆ ಸೇರಿದ ಬಡಕುಟಂಬವೊಂದರಲ್ಲಿ ಜನಿಸಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಅನಂತರ ಡಾಲ್ಮೇಷಿಯದ ಪ್ರಾಂತ್ಯಾಧಿಕಾರಿಯಾಗಿದ್ದ. ಮ್ಯಾಕ್ಸಿಮೀಯನ್ ಚಕ್ರವರ್ತಿಯಿಂದ 293ರ ಮಾರ್ಚಿ 1 ರಂದು ಸೀಸóರ್ ಪದವಿ ಪಡೆದ ಮೇಲೆ ಅವನ ಪುತ್ರಿ ಥಿಯೋಡೋರಳನ್ನು ವಿವಾಹವಾದ. ಆ ವೇಳೆಗೆ ಇವನಿಗೊಬ್ಬ ಮಗನಿದ್ದ. ಅವನೇ ಮುಂದೆ ಚಕ್ರವರ್ತಿಯಾದ 1ನೆಯ ಕಾನ್‍ಸ್ಟಂಟೈನ್ ಮಹಾಶಯ. ಕನ್‍ಸ್ಟಾಷಸನಿಗೆ ಥಿಯೋಡೋರಳಲ್ಲಿ ಮೂವರು ಪುತ್ರರೂ ಮೂವರು ಪುತ್ರಿಯರೂ ಜನಿಸಿದರು. ಗಾಲ್ ಪ್ರಾಂತ್ಯಾಧಿಕಾರಿಯಾಗಿದ್ದಾಗ ಬ್ರಿಟನ್ ಪ್ರಾಂತ್ಯವನ್ನು ಕಬಳಿಸಿದ್ದ ಆರೇಲಿಯಸ್ ಕರಾಸಿಯಸನನ್ನು 293ರಲ್ಲೂ ಅವನ ಮಗ ಅಲೆಕ್ಟಸನನ್ನು 296 ರಲ್ಲೂ ಗೆದ್ದು ಬ್ರಿಟನ್ ಪ್ರಾಂತ್ಯವನ್ನು ಪುನರ್ವಶಪಡಿಸಿಕೊಂಡ. 298ರಲ್ಲಿ ಅಲಮನ್ನಿಯನ್ನು ಗೆದ್ದು ಬ್ರಿಟನ್ ಮತ್ತು ಗಾಲ್ ಪ್ರಾಂತ್ಯಗಳ ನಗರಗಳನ್ನು ಸ್ವಾಧೀನಮಾಡಿಕೊಂಡ. ಈತ ಕ್ರೈಸ್ತರ ಚರ್ಚುಗಳನ್ನು ನಾಶಪಡಿಸಿದರೂ ಆ ಮತಸ್ಥರನ್ನು ಹಿಂಸೆ ಮಾಡಲಿಲ್ಲ. 305ರ ಮೇ 1 ರಂದು ಡಯೊಕ್ಲಿಷಿಯನ್ ಮತ್ತು ಮ್ಯಾಕ್ಸಿಮೀಯನ್-ಇವರಿಬ್ಬರೂ ಅಧಿಕಾರ ತ್ಯಾಗಮಾಡಿದಾಗ ಪ್ರಥಮ ಆಗಸ್ಟಸ್ ಪದವಿ ಪಡೆದ ಕಾನ್‍ಸ್ಟಾನ್‍ಷಸ್ 306ರ ಬೇಸಗೆಯಲ್ಲಿ ಎಬೊರಕಮ್‍ನಲ್ಲಿ (ಈಗಿನ ಯಾರ್ಕ್) ಮೃತನಾದ.

 2ನೆಯ ಕಾನ್‍ಸ್ಟಾನ್‍ಷಸ್ (ಫ್ಲೇವಿಯಸ್ ಜೂಲಿಯಸ್): 317-61. ಕಾನ್‍ಸ್ಟಂಟೈನ್ ಮಹಾಶಯನ ಪುತ್ರ ಮತ್ತು ರೋಮನ್ ಚಕ್ರವರ್ತಿ. ಇಲ್ಲಿರಿಕಮ್‍ನಲ್ಲಿ 317ರ ಆಗಸ್ಟ್ 7ರಂದು ಜನಿಸಿದ. 324ರ ನವೆಂಬರ್ 8ರಂದು ಇವನಿಗೆ ಸೀಸರ್ ಪದವಿ ದೊರಕಿತು. 337ರಲ್ಲಿ ತನ್ನ ತಂದೆಯ ಮರಣ ಸಂಭವಿಸಿದ ತರುವಾಯ ಸೋದರರಾದ 2ನೆಯ ಕಾನ್‍ಸ್ಟಂಟೈನ್ ಮತ್ತು ಕಾನ್‍ಸ್ಟನ್ಸ್ ರೊಂದಿಗೆ ರಾಜ್ಯ ವಿಭಾಗಮಾಡಿಕೊಂಡಾಗ, ಥ್ರೇಸ್, ಮ್ಯಾಸಿಡೋನಿಯ, ಗ್ರೀಸ್, ಏಷ್ಯ ಮತ್ತು ಈಜಿಷ್ಟ್ ಪ್ರಾಂತ್ಯಗಳು ಇವನಿಗೆ ಲಭಿಸಿದುವು. ಇವನ ಆಳ್ವಿಕೆಯ ಪೂರ್ವಾರ್ಧ (338-350) ಪರ್ಷಿಯಾದ ದೊರೆ 2ನೆಯ ಷಾಪೂರ್‍ನೊಂದಿಗೆ ಮಾಡಿದ ಯುದ್ದಗಳಲ್ಲಿ ಕಳೆಯಿತು. 350ರಲ್ಲಿ ಇವನ ದಳಪತಿ ವೆಟ್ರಾನಿಯೊ ದಂಗೆಯೆದ್ದುದರಿಂದ ಯೂರೋಪಿಗೆ ಮರಳಿದಾಗ, ಅವನ ಸೈನ್ಯ ಯುದ್ದವಿಲ್ಲದೆ. ಕಾನ್‍ಸ್ಟಾನ್‍ಷಸನಿಗೆ ಶರಣಾಗತವಾದುವು. ಇನ್ನೊಬ್ಬ ಸೈನ್ಯಾಧಿಕಾರಿ ಮ್ಯಾಗ್ನೆನ್‍ಷಿಯಸನನ್ನು 351ರಲ್ಲಿ ಮುರ್ಸಾ ಕದನದಲ್ಲಿ ಹತ್ತಿಕ್ಕಿದ. ಪೌರಸ್ತ್ಯ ಪ್ರದೇಶಗಳಿಗೆ ತನ್ನ ಮಲತಮ್ಮ ಗ್ಯಾಲಸ್ ಸೀಸóರನ್ನು 351ರಲ್ಲಿ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದರೂ 354ರಲ್ಲಿ ಅವನನ್ನು ಮರಣದಂಡನೆಗೀಡುಮಾಡಬೇಕಾಯಿತು. ಕೊಲೋನಿನ ಚಕ್ರವರ್ತಿಯೆಂದು ನಟಿಸುತ್ತಿದ್ದ ಸಿಲ್ವನಸನನ್ನು 355ರಲ್ಲಿ ಕೊಲ್ಲಿಸಿ ಗಾಲ್ ಪ್ರಾಂತ್ಯಕ್ಕೆ ಗ್ಯಾಲಸನ ಮಲತಮ್ಮ ಜ್ಯೂಲಿಯನನನ್ನು ಅಧಿಕಾರಿಯಾಗಿ ನೇಮಿಸಿದ. 359ರಲ್ಲಿ ರೋಮಿಗೆ ತೆರಳಿ ಅಲ್ಲಿಯ ಜಗಳಗಳಲ್ಲಿ ನಿರತನಾಗಿದ್ದಾಗ, ಪರ್ಷಿಯನ್ ದೊರೆ ಷಾಪೂರ್ ಪೂರ್ವಪ್ರಾಂತ್ಯಗಳ ಮೇಲೆ ಆಕ್ರಮಣ ನಡೆಸಿದುದರಿಂದ 359ರಲ್ಲಿ ಮೆಸೊಪೊಟೇಮಿಯಕ್ಕೆ ಬರಬೇಕಾಯಿತು. ಪುನಃ 361ರಲ್ಲಿ ಜ್ಯೂಲಿಯನ್ ದಂಗೆಯೇಳಲು ಗಾಲ್ ಪ್ರಾಂತ್ಯಕ್ಕೆ ಹಿಂದಿರುಗುತ್ತಿದ್ದಾಗ 361ರ ನವೆಂಬರ್ 3 ರಂದು ಸೈಲೀಷಿಯದಲ್ಲಿ ಮೃತನಾದ.

 ಕಾನ್‍ಸ್ಟಾನ್‍ಷಸ್ ಮತೀಯ ವಿಚಾರಗಳಲ್ಲಿ ಹೆಚ್ಚು ಆಸಕ್ತಿಹೊಂದಿದ್ದ. ಈತ ಆರಿಯನ್ ಪಂಥಕ್ಕೆ ಸೇರಿದವನಾಗಿದ್ದು, ಇತರ ಮತಗಳ ವಿರೋಧಿಯಾಗಿದ್ದ. ಇವನ ಕಾಲದಲ್ಲಿ ಹಲವಾರು ಮತೀಯ ಸಮ್ಮೇಳನಗಳು ನಡೆದವು.

 3ನೆಯ ಕಾನ್‍ಸ್ಟಾನ್‍ಷಸ್ : ಮರಣ 421. ರೋಮನ್ ಚಕ್ರವರ್ತಿ. ನಯಿಸಸ್‍ನಲ್ಲಿ ಜನಿಸಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಅಧಿಕಾರ ಕಸಿದುಕೊಂಡಿದ್ದ ಕಾನ್‍ಸ್ಟಂಟೈನ್‍ನನ್ನು ಸೋಲಿಸಲು ಹೋರಾಡಿದ. ಅನಂತರ ದಕ್ಷಿಣ ಗಾಲ್ ಪ್ರಾಂತ್ಯದಿಂದ ವಿಸಿಗಾತ್ ಜನರನ್ನು ಸ್ಪೇನಿಗೆ ದೂಡಲು ಮುಖ್ಯ ಕಾರಣನೀತ. 417ರಲ್ಲಿ ಚಕ್ರವರ್ತಿಯ ತಂಗಿ ಪ್ಲಾಸಿಡಿಯಳನ್ನು ವಿವಾಹವಾಗಿ, ಮುಂದಿನ ಚಕ್ರವರ್ತಿ 3ನೆಯ ವ್ಯಾಲೆಂಟಿನಿಯನನನ್ನು ಪಡೆದ. ಆಗಸ್ಟಸ್ ಪದವಿಯೊಂದಿಗೆ 421ರ ಫೆಬ್ರವರಿ 8 ರಂದು ಚಕ್ರವರ್ತಿಯಾಗಿ ಇವನ ನೇಮಕವಾಯಿತು. ಅದೇ ವರ್ಷದ ಸೆಪ್ಟಂಬರ್ 2 ರಂದು ರವೆನ್ನಾ ಎಂಬಲ್ಲಿ ಮೃತನಾದ.   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ